
ಹಂಪಿ: ಐತಿಹಾಸಿಕ ಹಂಪಿ ಉತ್ಸವ 2025 ತನ್ನ ವೈಭವದಿಂದ ಎಲ್ಲರ ಗಮನ ಸೆಳೆದಿದ್ದು, ಈ ಬಾರಿಯ ಉತ್ಸವದಲ್ಲಿ ಮಹಿಳಾ ವಿಚಾರ ಗೋಷ್ಠಿ ವಿಶೇಷ ಆಕರ್ಷಣೆಯಾಗಿದೆ. ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ನಡೆದ ಈ ಸಮಾವೇಶದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಲೇಖಕಿ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿ ಅವರು “ವಿಜಯನಗರ ಕಾಲದ ಮಹಿಳೆ ಮತ್ತು ಮನೋರಂಜನಾ ಕ್ರೀಡೆಗಳು” ಎಂಬ ಮಹತ್ವದ ವಿಷಯದ ಕುರಿತು ಪ್ರಬಂಧ ಮಂಡಿಸಿದರು.


ಈ ವಿಚಾರ ಗೋಷ್ಠಿಯನ್ನು ಮಹಿಳಾ ಚಿಂತಕಿ ಶೈಲಜಾ ಹಿರೇಮಠ್ ಉದ್ಘಾಟಿಸಿದರು, ಹಾಗೂ ಪ್ರಸಿದ್ಧ ಸಾಹಿತಿ ಎಸ್.ವಿ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿಜ್ಞಾನ, ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಡಾ. ಅನುರಾಧಾ ಕುರುಂಜಿಯವರ ಪ್ರಬಂಧವು ವಿಜಯನಗರ ಸಾಮ್ರಾಜ್ಯದ ಮಹಿಳೆಯರ ಪಾತ್ರ, ಅವರ ಮನೋರಂಜನಾ ಚಟುವಟಿಕೆಗಳು, ಕಲೆ ಮತ್ತು ಕ್ರೀಡಾ ಸಂಸ್ಕೃತಿ ಕುರಿತಾದ ಐತಿಹಾಸಿಕ ಅಧ್ಯಯನವನ್ನು ಮಾಡಿ, ಅದನ್ನು ಗೋಷ್ಠಿಯಲ್ಲಿ ಮಂಡಿಸಿದ್ದಾರೆ. ಅವರ ಪ್ರಬಂಧವು ಆಧುನಿಕ ಮಹಿಳಾ ಜೀವನದೊಂದಿಗೆ ಗತವೈಭವದಿಂದ ಮೆರೆದಿದ್ದ ವಿಜಯನಗರ ಕಾಲದ ಮಹಿಳೆಯರ ಜೀವನವನ್ನು ಹೋಲಿಕೆ ಸಮೀಕ್ಷೆ ನೀಡುವುದರ ಮೂಲಕ, ಶ್ರೋತೃಗಳ ಗಮನ ಸೆಳೆಯಿತು.
ಹಂಪಿ ಉತ್ಸವವು ಪ್ರತಿ ವರ್ಷ ಲಕ್ಷಾಂತರ ಜನರನ್ನು ಆಕರ್ಷಿಸುವ ಒಂದು ಸಾಂಸ್ಕೃತಿಕ ಮಹೋತ್ಸವವಾಗಿದ್ದು, ಇದು ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉತ್ಸವವಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ, ಇಂತಹ ವಿಚಾರ ಗೋಷ್ಠಿಗಳು ಹಂಪಿಯ ಐತಿಹಾಸಿಕ ಮತ್ತು ಕಲಾತ್ಮಕ ವೈಭವವನ್ನು ಮತ್ತಷ್ಟು ಉಜ್ವಲಗೊಳಿಸುತ್ತವೆ.