
ಸುರತ್ಕಲ್ : ಪಿಕ್ ಅಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿರುವ ಘಟನೆ ರಾ.ಹೆದ್ದಾರಿ 66ರ ಕುಳಾಯಿಯಲ್ಲಿ ಶನಿವಾರ ವರದಿಯಾಗಿದೆ.


ಮೃತರನ್ನು ರಾಯಚೂರು ಜಿಲ್ಲೆಯ ಸಿಂದನೂರು ನಿವಾಸಿ ದೀಪು ಗೌಡ ಯಾನೆ ಪೊಂಪನ ಗೌಡ (50) ಎಂದು ತಿಳಿದು ಬಂದಿದೆ. ಇವರ ಸ್ನೇಹಿತರಾದ ಕೊಪ್ಪಳ ಜಿಲ್ಲೆಯ ಕಾರಟಗಿ ನಿವಾಸಿ ಪ್ರದೀಪ್ ಕೊಲ್ಕರ್ (35), ಸುರತ್ಕಲ್ ಕೋಡಿಕೆರೆ ನಿವಾಸಿ ನಾಗರಾಜ ಉಮೇಶ್ ಅಮೀನ್ ( 42) ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗೆಳೆಯರಾದ ದೀಪು ಗೌಡ ಯಾನೆ ಪೊಂಪನ ಗೌಡ, ಪ್ರದೀಪ್ ಮತ್ತು ನಾಗರಾಜ್ ಅವರು ಕುಳಾಯಿಯ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ರಾ.ಹೆ. 66 ರಸ್ತೆಯನ್ನು ದಾಟಿ ಉಡುಪಿಯಿಂದ ಮಂಗಳೂರಿಗೆ ಹೋಗುವ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಆರೋಪಿ ಸುಕುಮಾರ ಎಂಬಾತ ಅತಿಯಾದ ವೇಗ ಮತ್ತು ಅಜಾಗರೂಕತೆ ನಿರ್ಲಕ್ಷ್ಯದಿಂದ ತನ್ನ ಪಿಕ್ ಅಪ್ ವಾಹನ ಚಲಾಯಿಸಿಕೊಂಡು ಎದುರಿನಲ್ಲಿದ್ದ ಕಾರೊಂದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಅಪಘಾತದ ಪರಿಣಾಮ ಕಾರು ಮುಂದಕ್ಕೆ ರಸ್ತೆಯ ಎಡ ಬದಿಗೆ ತಳ್ಳಲ್ಪಟ್ಟು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ದೀಪು ಗೌಡ ಯಾನೆ ಪೊಂಪನ ಗೌಡ, ಪ್ರದೀಪ್ ಮತ್ತು ನಾಗರಾಜ್ ಅವರಿಗೆ ಢಿಕ್ಕಿ ಹೊಡೆದಿದೆ. ಪ್ರದೀಪ್ ಮತ್ತು ನಾಗರಾಜ್ ಅವರು ರಸ್ತೆಗೆ ಎಸೆಯಲ್ಪಟ್ಟು ದೀಪು ಗೌಡ ಯಾನೆ ಪೊಂಪನ ಗೌಡ ಅವರ ಸಮೇತ ರಸ್ತೆಯ ಎಡಬದಿ ನಿಲ್ಲಿಸಿದ್ದ ಗೂಡ್ಸ್ ಲಾರಿಗೆ ಢಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ದೀಪು ಗೌಡ ಅವರ ತಲೆಗೆ ಮತ್ತು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದು, ಪ್ರದೀಪ್ ರಿಗೆ ಮುಖಕ್ಕೆ ಮತ್ತು ಹಣೆಗೆ ರಕ್ತಗಾಯವಾಗಿದೆ. ಅಲ್ಲದೆ ನಾಗರಾಜ್ ಅವರ ಸೊಂಟಕ್ಕ ಗುದ್ದಿದ ರೀತಿಯ ಗಾಯವಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.