
ಉತ್ತರಾಖಂಡ: ಉತ್ತರಾಖಂಡದ ವಿವಿಧ ಸ್ಥಳಗಳಲ್ಲಿ ನಡೆದ 38ನೇ ಭಾರತದ ರಾಷ್ಟ್ರೀಯ ಕ್ರೀಡಾಕೂಟವು ಇಂದು ಅದ್ಭುತವಾದ ಸಮಾರೋಪ ಸಮಾರಂಭದೊಂದಿಗೆ ಅದ್ಧೂರಿಯಾಗಿ ಮುಕ್ತಾಯಗೊಂಡಿತು. ಜನವರಿ 28 ರಿಂದ ಫೆಬ್ರವರಿ 14, 2025 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಕ್ರೀಡಾಪಡುಗಳು ಅಸಾಧಾರಣ ಕ್ರೀಡಾ ಮನೋಭಾವ, ಸಮರ್ಪಣೆಯೊಂದಿಗೆ ಭಾಗವಹಿಸಿದ್ದರು. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡೆ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಸಮಾರೋಪ ಸಮಾರಂಭದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ, ಅದ್ಭುತ ಪ್ರದರ್ಶನ ಮತ್ತು ಸ್ಪರ್ಧೆಯ ಮನೋಭಾವವನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ, ಮೇಘಾಲಯದ ಮುಖ್ಯಮಂತ್ರಿ ಶ್ರೀ ಕಾನ್ರಾಡ್ ಸಂಗ್ಮಾ, ಭಾರತೀಯ ಒಲಿಂಪಿಕ್ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪಿ.ಟಿ. ಉಷಾ ಮತ್ತು ಇತರ ಪ್ರಮುಖ ನಾಯಕರು ಸೇರಿದಂತೆ ಹಲವಾರು ಗೌರವಾನ್ವಿತ ಗಣ್ಯರು ಉಪಸ್ಥಿತರಿದ್ದರು.


38 ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ದಕ್ಷತೆ ಮತ್ತು ಸಮರ್ಪಣಾಭಾವದಿಂದ ಆಯೋಜಿಸಿದ್ದಕ್ಕಾಗಿ ಉತ್ತರಾಖಂಡಕ್ಕೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾ ತಮ್ಮ ಭಾಷಣವನ್ನು ಪ್ರಾರಂಭಿಸಿದ ಡಾ. ಮಾಂಡವೀಯ “ಉತ್ತರಾಖಂಡವನ್ನು ಎಲ್ಲರೂ ‘ದೇವಭೂಮಿ‘ ಎಂದು ಕರೆಯುತ್ತಾರೆ, ಆದರೆ 38 ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಿದ ನಂತರ, ‘ಕ್ರೀಡಾ ಭೂಮಿ‘ ಎಂಬ ಬಿರುದನ್ನೂ ಪಡೆದಿದೆ” ಎಂದು ಹೇಳಿದರು. ಉತ್ತರಾಖಂಡದಲ್ಲಿ ಕ್ರೀಡಾಕೂಟವನ್ನು ಆಯೋಜಿಸಿ, ಅಲ್ಲಿನ ಎಲ್ಲಾ ಚಿಕ್ಕ – ಪುಟ್ಟ ಅಗತ್ಯಗಳನ್ನು ಪರಿಶೀಲಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾಗಿ, ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಅವರ ನಾಯಕತ್ವವನ್ನು ಶ್ಲಾಘಿಸಿದರು. “ಈ ಕ್ರೀಡಾಕೂಟಗಳ ಸುಗಮ ಮತ್ತು ಯಶಸ್ವಿ ಆಯೋಜನೆಯು ಉತ್ತರಾಖಂಡದ ಸಾಮರ್ಥ್ಯ ಮತ್ತು ಸಮರ್ಪಣೆಯನ್ನು ಸೂಚಿಸುತ್ತದೆ” ಎಂದು ಹೇಳಿದರು.

ಸಚಿವರು ವಿಜೇತ ತಂಡಗಳು ಮತ್ತು ಎಲ್ಲಾ ಕ್ರೀಡಾಪಟುಗಳನ್ನು ಅಭಿನಂದಿಸುತ್ತಾ, “ಕ್ರೀಡೆಯಲ್ಲಿ ಯಾರೂ ಸೋಲುವುದಿಲ್ಲ ವಾಸ್ತವದಲ್ಲಿ ನೀವು ಗೆಲ್ಲುತ್ತೀರಿ ಅಥವಾ ಏನನ್ನಾದರೂ ಕಲಿಯುತ್ತೀರಿ” ಎಂದು ಹೇಳಿದರು. ಎಲ್ಲಾ ವಿಜೇತರನ್ನು ಅವರ ಅತ್ಯುತ್ತಮ ಸಾಧನೆಗಳಿಗಾಗಿ ಅಭಿನಂದಿಸಿದರು. ಏಷ್ಯನ್ ಕ್ರೀಡಾಕೂಟ, ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್‌ನಂತಹ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಕ್ರೀಡಾಪಟುಗಳನ್ನು ಪ್ರೇರೇಪಿಸಿದರು. “ನೀವು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಾಗ, ನೀವು ನಿಮ್ಮಲ್ಲಿ ವಿಶ್ವಾಸವನ್ನಿಡಬೇಕು, ನಿಮ್ಮ ಸಾಮರ್ಥ್ಯವನ್ನು ನಂಬಬೇಕು” ಎಂದರು.
ಕ್ರೀಡೆಯಿಂದ ಏಕತೆಯನ್ನು ಎಂದು ಹೇಳಿದ ಡಾ. ಮಾಂಡವೀಯ, “ಒಬ್ಬ ಕ್ರೀಡಾಪಟು ಗೆದ್ದಾಗ, ಇಡೀ ರಾಷ್ಟ್ರವೇ ಸಂಭ್ರಮಿಸುತ್ತದೆ. ಕ್ರೀಡೆಯಲ್ಲಿ, ಒಬ್ಬ ಕ್ರೀಡಾಪಟುವಿನ ಗೆಲುವು ಇಡೀ ದೇಶದ ಗೆಲುವಾಗುತ್ತದೆ” ಎಂದು ಹೇಳಿದರು. “ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಕ್ರೀಡಾ ಅಭಿವೃದ್ಧಿಗೆ ಸದೃಢ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ ನವ ಭಾರತ’ದಲ್ಲಿ ಕ್ರೀಡೆಗಳು ಮಹತ್ವದ ಹೆಜ್ಜೆ ಇಟ್ಟಿವೆ ಮತ್ತು ದೇಶದ ಕ್ರೀಡೆಗಳು ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ” ಎಂದು ಹೇಳಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, “ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರಾರಂಭಿಸಲಾದ ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾದಂತಹ ಉಪಕ್ರಮಗಳು ಯುವಜನರನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿವೆ”ಎಂದರು. ಯುವಜನರು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ ಪ್ರಧಾನ ಮಂತ್ರಿಯವರ ದೃಷ್ಟಿಕೋನವನ್ನು ಷ್ಲಾಘಿಸಿದರು. ಈಗ ಅನೇಕರು ಪ್ರಧಾನ ಮಂತ್ರಿಗಳನ್ನು “ಖೇಲ್ ಮಿತ್ರ” ಎಂದು ಕರೆಯುತ್ತಾರೆ. ಕ್ರೀಡಾ ಅಭಿವೃದ್ಧಿಗಾಗಿ ಸರಕಾರವು ಬದ್ಧವಾಗಿದೆ. ಕಳೆದ 10 ವರ್ಷಗಳಲ್ಲಿ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಂತಹ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತದ ಪದಕ ಪಟ್ಟಿಯಲ್ಲಿನ ಗಮನಾರ್ಹ ಸುಧಾರಣೆಯಾಗಿದೆ. ದೇಶದ ಕ್ರೀಡಾ ಸಂಸ್ಕೃತಿ ವಿಕಸನಗೊಳ್ಳುತ್ತಿದೆ ಎಂದರು.
38ನೇ ರಾಷ್ಟ್ರೀಯ ಕ್ರೀಡಾಕೂಟ 2025: ಉತ್ತರಾಖಂಡದಲ್ಲಿ ಭವ್ಯ ಕ್ರೀಡಾ ಹಬ್ಬ – Newsroom First
38ನೇ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭದೊಂದಿಗೆ 48 ಚಿನ್ನ, 47 ಬೆಳ್ಳಿ ಮತ್ತು 58 ಕಂಚಿನ ಪದಕಗಳನ್ನು ಗೆದ್ದ ಹರಿಯಾಣ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿತು. ಮಹಾರಾಷ್ಟ್ರ 54 ಚಿನ್ನ, 71 ಬೆಳ್ಳಿ ಮತ್ತು 76 ಕಂಚಿನ ಪದಕಗಳೊಂದಿಗೆ ಮೊದಲ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿತು. ಸರ್ವೀಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ 68 ಚಿನ್ನ, 26 ಬೆಳ್ಳಿ ಮತ್ತು 27 ಕಂಚಿನ ಪದಕಗಳನ್ನು ಗೆದ್ದು ಈ ಕ್ರೀಡಾಕೂಟವನ್ನು ಗೆದ್ದು ಬೀಗಿತು. ಕ್ರೀಡಾಕೂಟದ ಪ್ರಾರಂಭದಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕವು ಸಮಾರೋಪದ ವೇಳೆಗೆ 34 ಚಿನ್ನ, 18 ಬೆಳ್ಳಿ, 28 ಕಂಚಿನ ಪದಕಗಳನ್ನು ಗೆದ್ದು, 5 ನೇ ಸ್ಥಾನ ಗಳಿಸಿ ತೃಪ್ತವಾಯಿತು.
2026 ರಲ್ಲಿ 39ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸುವ ಜವಾಬ್ದಾರಿಯನ್ನು ಮೇಘಾಲಯಕ್ಕೆ ವಹಿಸಲಾಗಿದೆ.