
ಕಲರ್ಸ್ ಕನ್ನಡದಲ್ಲಿ, ಲೋಕೇಶ್ ಪ್ರೊಡಕ್ಷನ್ಸ್ ಅವರ ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ – ಮಜಾ ಟಾಕೀಸ್ ಪ್ರಾರಂಭವಾಗಿದೆ. ಸೃಜನ್ ಲೋಕೇಶ ಅವರು ನಡೆಸಿ ಕೊಡುವ ಈ ಕಾರ್ಯಕ್ರಮವು ಎಲ್ಲರನ್ನೂ ನಕ್ಕು – ನಲಿಸುವುದರ ಜೊತೆಗೆ ಅನೇಕ ಪ್ರತಿಭೆಗಳಿಗೆ ಒಂದು ವೇದಿಕೆಯನ್ನೂ ನೀಡುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮವು 2015 ರಲ್ಲಿ ಪ್ರಾರಂಭವಾಯಿತು. ಅಂದಿನಿಂದಲೂ ಕನ್ನಡಿಗರನ್ನು ನಗಿಸುತ್ತಲೇ ಇರುವ ಈ ಕಾರ್ಯಕ್ರಮಕ್ಕೆ 10 ವರ್ಷಗಳಾಗಿವೆ.



ಕನ್ನಡವನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಅಪರ್ಣಾ ಅವರನ್ನು ನೆನೆಯುತ್ತಾ ಕಾರ್ಯಕ್ರಮವನ್ನು ಪ್ರಾರಂಭಿಸಿದ ಸೃಜನ್ ಲೋಕೇಶ್, ನಮ್ಮ ಕಾರ್ಯಕ್ರಮದ ವನ್ ಆಂಡ್ ಓನ್ಲಿ ವರಲಕ್ಷ್ಮಿ ವನ್ ಆಂಡ್ ಓನ್ಲಿ ನೇ. ಅವರಂತಹ ಒಬ್ಬ ವ್ಯಕ್ತಿ ಇನ್ನೊಬ್ಬರು ಖಂಡಿತಾ ಇಲ್ಲ ಎಂದಿದ್ದಾರೆ. ಹೊಸತಾಗಿ ಪ್ರಾರಂಭವಾಗುತ್ತಿರುವ ಈ 4ನೇ ಸೀಸನ್ ಅನ್ನು ಅಪರ್ಣಾ ಅವರಿಗೆ ಅರ್ಪಣೆ ಮಾಡಿದ್ದಾರೆ.

ಇನ್ನು ಮುಂದೆ ನೀವು ಮುಂಗಾರು ಮಳೆ ಖ್ಯಾತಿಯ ನಿರ್ದೇಶಕ ಯೋಗರಾಜ್ ಭಟ್ ಇವರನ್ನು ಕಾರ್ಯಕ್ರಮದಲ್ಲಿ ವೀಕ್ಷಿಸಬಹುದು. ಹಾಸ್ಯಮಯವಾಗಿ ಕುಣಿದ ಯೋಗರಾಜ್ ಭಟ್ ಅವರು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಈ ಸೀಸನ್ನಲ್ಲಿ ಕುರಿ ಪ್ರತಾಪ್, ವಿಶ್ವ, ಚಂದ್ರಪ್ರಭ, ಪ್ರಿಯಾಂಕ ಕಾಮತ್, ತುಕಾಲಿ ಸಂತೋಷ್, ವಿನೋದ್ ಗೊಬರಗಾಲ, ಶಿವು, ಮಿಮಿಕ್ರಿ ಗೋಪಿ ಮುಂತಾದವರು ಕನ್ನಡಿಗರನ್ನು ನಕ್ಕು ನಗಿಸಲಿದ್ದಾರೆ.
ಮಜಾ ಟಾಕೀಸ್ನಲ್ಲಿ ಹೊಸ ಚಲನ ಚಿತ್ರ ತಂಡಗಳನ್ನು ಆಹ್ವಾನಿಸುವುದನ್ನು, ಅವರು ತಮ್ಮ ಚಿತ್ರದ ಬಗ್ಗೆ ಪ್ರಚಾರ ಮಾಡುವುದನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಈ ಸೀಸನ್ ಉದ್ಘಾಟನಾ ಸಂಚಿಕೆಗೆ ವಿಶೇಷ ಅತಿಥಿಗಳು ಉಪಸ್ಥಿತರಿದ್ದದ್ದು ಇನ್ನೂ ವಿಶೇಷವೆನಿಸಿತು. ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ದಿವ್ಯಾಂಗ ಈಜುಪಟು ವಿಶ್ವಾಸ್ ಕೆ. ಎಸ್., ಮರಳು ಚಿತ್ರಕಾರರಾದ ರೇಣುಕಾಸ್ವಾಮಿ, ರಂಗಸ್ವಾಮಿ, ಯಾವುದೇ ತಾರೀಕನ್ನು ಹೇಳಿದರೂ, ಅದು ಯಾವ ವಾರ ಬರುತ್ತದೆ ಎಂದು ಹೇಳುವ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಬಸವರಾಜು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇವರೆಲ್ಲರೂ, ಎಲೆಮರೆಯ ಕಾಯಿಯಂತಿದ್ದು, ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಬಂದ ನಂತರ ತಮ್ಮ ಜೀವನದಲ್ಲಿ ಯಶಸ್ಸಿನ ತಿರುವನ್ನು ಕಂಡವರು.