
ನವದೆಹಲಿ: ಭಾರತದ ಔಷಧ ರಫ್ತು ದುಪ್ಪಟ್ಟಾಗುವ ನಿರೀಕ್ಷೆಯಿದೆ. 2023 ರಲ್ಲಿ ಸುಮಾರು $27 ಬಿಲಿಯನ್ ಇದ್ದ ರಫ್ತು 2030 ರ ವೇಳೆಗೆ $65 ಬಿಲಿಯನ್‌ಗೆ ಏರಿಕೆಯಾಗಲಿದೆ ಮತ್ತು 2047 ರ ವೇಳೆಗೆ ಅಂದಾಜು $350 ಬಿಲಿಯನ್‌ಗೆ ಏರಿಕೆಯಾಗಲಿದೆ ಎಂದು ಬೈನ್ & ಕಂಪನಿಯ ಹೊಸ ವರದಿಯು ತಿಳಿಸಿದೆ. ಭಾರತವು ಜಾಗತಿಕವಾಗಿ ಅತಿದೊಡ್ಡ ಸಾಮಾನ್ಯ ಔಷಧಿ (ಜೆನೆರಿಕ್ ಡ್ರಗ್ಸ್) ಪೂರೈಕೆದಾರವಾಗಿದ್ದು, ವಿಶ್ವದಾದ್ಯಂತ ಮಾರಾಟವಾಗುವ ಪ್ರತಿ ಐದು ಸಾಮಾನ್ಯ ಔಷಧಿಗಳಲ್ಲಿ ಒಂದನ್ನು ಪೂರೈಕೆ ಮಾಡುತ್ತಿದೆ. ಹಾಗಿದ್ದರೂ, ಒಟ್ಟು ರಫ್ತು ಮೌಲ್ಯದ ದೃಷ್ಟಿಯಿಂದ ಭಾರತ ಈಗ 11ನೇ ಸ್ಥಾನದಲ್ಲಿದೆ.



ಬೈನ್ ಅಂಡ್ ಕಂಪನಿ, ಇಂಡಿಯನ್ ಫಾರ್ಮಸ್ಯೂಟಿಕಲ್ ಅಲೈಯನ್ಸ್ (IPA), ಇಂಡಿಯನ್ ಡ್ರಗ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (IDMA) ಮತ್ತು ಫಾರ್ಮೆಕ್ಸಿಲ್ ಸಹಯೋಗದಲ್ಲಿ ಪ್ರಕಟಿಸಿದ ವರದಿ ಪ್ರಕಾರ, ವಿಶೇಷ ಸಾಮಾನ್ಯ ಔಷಧಿಗಳು (Specialty Generics), ಬಯೋಸಿಮಿಲರ್ಸ್ (Biosimilars), ಮತ್ತು ನಾವೀನ್ಯ ಉತ್ಪನ್ನಗಳ ರಫ್ತನ್ನು ಹೆಚ್ಚಿಸುವ ಮೂಲಕ, 2047ರ ವೇಳೆಗೆ ಭಾರತ ಮುಂಚೂಣಿಯಲ್ಲಿರುವ 5 ರಫ್ತು ದೇಶಗಳಲ್ಲಿ ಒಂದಾಗುವ ಸಾಧ್ಯತೆ ಇದೆ.
ಭಾರತ ಆಗಲಿದೆ ‘ಆರೋಗ್ಯ ರಕ್ಷಕ’ ರಾಷ್ಟ್ರ
ಭಾರತವು ದೀರ್ಘಕಾಲದಿಂದ ‘ವಿಶ್ವದ ಫಾರ್ಮಸಿ’ ಎಂದು ಹೆಸರುವಾಸಿಯಾಗಿದೆ. ಈಗ ಅದನ್ನು ‘ವಿಶ್ವದ ಆರೋಗ್ಯ ರಕ್ಷಕ’ವನ್ನಾಗಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಗುರಿಯನ್ನು ಸಾಧಿಸಲು ಸರ್ಕಾರ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವ ಜೊತೆಗೆ ಸುಗಮ ನಿಯಂತ್ರಣ ವ್ಯವಸ್ಥೆ ಒದಗಿಸುವಲ್ಲಿ ಸಂಪೂರ್ಣ ಬದ್ಧವಾಗಿದೆ,” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.
ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆ ಮತ್ತು ಸರಕಾರದ ನಡುವಿನ ಸಹಭಾಗಿತ್ವವನ್ನು ಬಲಪಡಿಸುವ ಮೂಲಕ, ನಾವು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವ ಔಷಧೋದ್ಯಮವನ್ನು ಕಟ್ಟಲು ಮುಂದಾಗಿದ್ದೇವೆ ಎಂದರು.
ಭಾರತದ API ಮತ್ತು ಬಯೋಸಿಮಿಲರ್ ಮಾರುಕಟ್ಟೆಯ ಬೆಳವಣಿಗೆ
ಬೈನ್ ಅಂಡ್ ಕಂಪನಿಯ ಪಾಲುದಾರ ಶ್ರೀರಾಮ್ ಶ್ರೀನಿವಾಸನ್ ಅವರು, “ಸಾಮಾನ್ಯ ಔಷಧಿಗಳ ರಫ್ತನ್ನು ಅಷ್ಟೇ ಅಲ್ಲದೇ, ಹೊಸ ಆವಿಷ್ಕಾರಗಳನ್ನು ಒಳಗೊಂಡ ಉತ್ಪನ್ನಗಳ ರಫ್ತನ್ನು ಉತ್ತೇಜಿಸಿದರೆ ಭಾರತ ಜಾಗತಿಕ ಔಷಧ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಬಹುದು,“ ಎಂದು ಹೇಳಿದರು.

ಪ್ರಸ್ತುತ $5 ಬಿಲಿಯನ್ ಮೌಲ್ಯದ ಭಾರತ API (Active Pharmaceutical Ingredients) ರಫ್ತು ಮಾರುಕಟ್ಟೆ 2047 ರ ವೇಳೆಗೆ $ 80-90 ಬಿಲಿಯನ್ ತಲುಪುವ ನಿರೀಕ್ಷೆಯಿದೆ. ಇದೀಗ ಜಾಗತಿಕ ಬಯೋಸಿಮಿಲರ್ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳ ಪಾಲು ಕೇವಲ 5% ಆಗಿದ್ದರೂ, ಮುಂದಿನ 3-4 ವರ್ಷಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು 40 ಕ್ಕೂ ಹೆಚ್ಚು ಉತ್ಪನ್ನಗಳನ್ನು ಪೂರೈಕೆ ಮಾಡುವ ಮೂಲಕ ಈ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಬಹುದು. ಪ್ರಸ್ತುತ $0.8 ಬಿಲಿಯನ್ ಮೌಲ್ಯದ ಭಾರತೀಯ ಬಯೋಸಿಮಿಲರ್ ರಫ್ತು 2030 ರ ವೇಳೆಗೆ 5 ಪಟ್ಟು ಹೆಚ್ಚಾಗಿ $4.2 ಬಿಲಿಯನ್ ತಲುಪುವ ನಿರೀಕ್ಷೆಯಿದೆ. 2047ರ ವೇಳೆಗೆ ಇದು $30-35 ಬಿಲಿಯನ್ ತಲುಪಬಹುದು.