ಈ ಬಾರಿಯ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವು ದೆಹಲಿಯ ಭಾರತ್ ಮಂಡಪಂನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಯಿತು. ಈ ಬಾರಿ ಪರೀಕ್ಷಾ ಪೆ ಚರ್ಚಾ- ಇದರ 8 ನೇ ಕಾರ್ಯಕ್ರಮ ಆಯೋಜಿಸಿದ್ದು, ಇದು ಸ್ವತಃ ಒಂದು ದಾಖಲೆಯಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರಕಾರಿ ಶಾಲೆಗಳು, ಕೇಂದ್ರಿಯ ವಿದ್ಯಾಲಯ, ಮಿಲಿಟರಿ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ, ಸಿಬಿಎಸ್ಸಿ ಮತ್ತು ನವೋದಯ ವಿದ್ಯಾಲಯಗಳಿಂದ ಆಯ್ದ 36 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪರೀಕ್ಷಾ ಪೆ ಚರ್ಚಾ 2025 ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ನೀಡಿದ ಸಲಹೆಗಳು ಈ ಕೆಳಗಿನಂತಿವೆ;
ಆರೋಗ್ಯಕ್ಕೆ ಉತ್ತಮ ನಿದ್ರೆ ಅಗತ್ಯ.
ಪ್ರಾಣಾಯಾಮ ಒಂದು ಉತ್ತಮ ಅಭ್ಯಾಸ. ಇದರಿಂದ ನಾವು ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬಹುದು.
ತಂದೆ, ತಾಯಿ ಮತ್ತು ಗುರುಗಳಿಗೆ ಗೌರವ ಕೊಡಬೇಕು.
ದಿನದಲ್ಲಿ ಒಂದು ಬಾರಿ ತಮ್ಮೊಡನೆ ಮಾತಾಡಿಕೊಳ್ಳಬೇಕು. ಆತ್ಮ ವಿಮರ್ಶೆ ಮಾಡಬೇಕು.
ಸಂತೋಷಕ್ಕೆ ತನ್ನದೇ ಆದ ಶಕ್ತಿ ಇದೆ. ಜೀವನದ ಪ್ರತೀ ಕ್ಷಣವನ್ನು ಸಂತೋಷದಿಂದ ಜೀವಿಸಬೇಕು.
ನಮ್ಮ ಕಳೆದು ಹೋದ ಕ್ಷಣಗಳನ್ನು ಸೋಲಿಸುವಂತೆ ನಾವು ಪ್ರಸ್ತುತ ಕ್ಷಣವನ್ನು ಜೀವಿಸಬೇಕು.
ತನ್ನೊಡನೆ ಸ್ಪರ್ಧಿಸುವ ವ್ಯಕ್ತಿಯನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ. ಆತ ಜೀವನದಲ್ಲಿ ಗೆದ್ದೇ ಗೆಲ್ಲುತ್ತಾನೆ.
ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಬೇಕು. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ಅರಿತುಕೊಂಡು, ಅದನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜೀವನದಲ್ಲಿ A+ ಪಡೆಯಬೇಕು, ಆಗ ಪರೀಕ್ಷೆಯಲ್ಲೂ A+ ತಾನಾಗೇ ಬರುತ್ತದೆ.
ಜೀವನ ಎಂದರೆ ಪರೀಕ್ಷೆಗಳಿಗೆ ಉತ್ತರಿಸಿ, ಅಂಕಗಳನ್ನು ಗಳಿಸುವುದಕ್ಕೇ ಸೀಮಿತವಾಗಿಲ್ಲ. ಜೀವನದಲ್ಲಿ ಇದರ ಹೊರತಾಗಿಯೂ ಅನೇಕ ವಿಷಯಗಳಿವೆ.
ಜೀವನದಲ್ಲಿ ಒಬ್ಬ ಒಳ್ಳೆಯ ಮಾರ್ಗದರ್ಶಕರು ಬೇಕು. ಅವರ ಮಾತುಗಳನ್ನು ಗೌರವಿಸಿ, ಅದಕ್ಕೆ ಸೂಕ್ತವಾಗಿ ನಡೆದುಕೊಳ್ಳಬೇಕು. ಇದರಿಂದ ಸಾಧನೆಯ ಹಾದಿ ಸುಲಭವಾಗುತ್ತದೆ.
ನಾಯಕರಾಗಬೇಕಾದರೆ ಟೀಮ್ ವರ್ಕ್ ಬಹಳ ಅಗತ್ಯ.
ಆಲಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು. ಯಾವುದನ್ನೇ ಆಗಲಿ, ಆಲಿಸಿ, ಅಲ್ಲಿನ ಚಿಕ್ಕ – ಪುಟ್ಟ ವ್ಯತ್ಯಾಸಗಳನ್ನು ಅರಿಯುವ ಸಾಮರ್ಥ್ಯ ನಿಮಗಿದ್ದರೆ, ನಿಮ್ಮ ಮನಸ್ಸು ಕೇಂದ್ರೀಕೃತವಾಗಿದೆ ಎಂದರ್ಥ.
ಸವಾಲುಗಳು ಎದುರಾದಾಗ ಹೆದರಬಾರದು. ಅವುಗಳನ್ನು ದಿಟ್ಟತನದಿಂದ ಎದುರಿಸಬೇಕು. ಅವುಗಳನ್ನು ಸೋಲಿಸುವ ಹಠ ತೊಡಬೇಕು.
ತಮ್ಮ ಮನಸ್ಸನ್ನು ಸ್ಥಿರವಾಗಿಡಲು ಕಲಿಯಬೇಕು.
ಪರೀಕ್ಷೆಗೆ ಬೇಕಾದ ಸಮಯವನ್ನು ಆಯೋಜಿಸಿಕೊಳ್ಳಬೇಕು.
ಪರೀಕ್ಷೆಗಳಿಗೆ ಮಕ್ಕಳು ತಾವೇ ಖುದ್ದಾಗಿ ತಯಾರಿ ಮಾಡಬೇಕು.
ಹೆಚ್ಚು ಹೆಚ್ಚು ಅಭ್ಯಾಸ ಮಾಡಬೇಕು. ಆಗ ಯಾವುದಕ್ಕೆ ಏನು ಉತ್ತರಿಸಬೇಕು? ಎಷ್ಟು ಉತ್ತರಿಸಬೇಕು? ಎಂಬ ಬಗ್ಗೆ ಸರಿಯಾಗಿ ಅರ್ಥವಾಗುತ್ತದೆ. ಇದರಿಂದ ನಮ್ಮ ಸಮಯ ವ್ಯರ್ಥವಾಗುವುದಿಲ್ಲ.
ಪರೀಕ್ಷೆಯತ್ತ ಗಮನ ಹರಿಸಬೇಕು. ಚಿಂತೆಯಿಂದ ದೂರವಿರಬೇಕು.
ಜ್ಞಾನ ಮತ್ತು ಪರೀಕ್ಷೆ ಎರಡು ಬೇರೆ ಬೇರೆ ವಿಷಯಗಳಾಗಿವೆ.
ಯಾವಾಗಲೂ ತಮ್ಮ ಗೆಳೆಯರಿಗೆ, ಸ್ನೇಹಿತರಿಗೆ ಸಹಾಯ ಮಾಡಬೇಕು.
ಬರೆಯುವ ಹವ್ಯಾಸಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಜೀವನದಲ್ಲಿ ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಬರೆಯುವ ಹವ್ಯಾಸವಿರುವ ವ್ಯಕ್ತಿ ತನ್ನೊಡನೆ ಮಾತನಾಡುತ್ತಿದ್ದಾನೆ ಎಂದರ್ಥ.
ರೋಬೋಟ್ ನಂತೆ ಅಭ್ಯಾಸ ಮಾಡಬಾರದು. ತಮ್ಮನ್ನು ಕೋಣೆಯೊಳಗೆ ಬಂಧಿಸಿ, ಪರೀಕ್ಷೆಯಲ್ಲಿ A+ ತೆಗೆದು ಏನೂ ಫಲವಿಲ್ಲ.
ಚರ್ಚೆಯಲ್ಲಿ ಪ್ರಧಾನಮಂತ್ರಿಗಳು ಮಕ್ಕಳ ಉತ್ತಮ ಭವಿಷ್ಯದಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಅವರಲ್ಲಿಯೂ ವಿನಂತಿ ಮಾಡಿದ ಮಾನ್ಯ ಮೋದೀಜಿ ಹೀಗೆಂದಿದ್ದಾರೆ;
ಪ್ರತಿಯೊಂದು ಮಗುವೂ ಶ್ರೇಷ್ಠ. ಪ್ರತಿಯೊಂದು ಮಗುವಿನಲ್ಲೂ ಒಂದು ಪ್ರತಿಭೆ ಇದೆ. ಪೋಷಕರು ತಮ್ಮ ಮಗುವನ್ನು ಅರಿತುಕೊಳ್ಳಬೇಕು. ಅವರ ಆಸಕ್ತಿ ಕ್ಷೇತ್ರದ ಬಗ್ಗೆ ತಿಳಿದುಕೊಂಡು, ಅದರಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಬೇಕು.
ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ತುಲನೆ ಮಾಡಬಾರದು. ವಿದ್ಯಾರ್ಥಿಯನ್ನು ಧನಾತ್ಮಕವಾಗಿ ಪ್ರೋತ್ಸಾಹಿಸಿ, ಉತ್ತಮ ಫಲಿತಾಂಶ ಪಡೆಯುವಂತೆ ಮಾರ್ಗದರ್ಶನ ನೀಡಬೇಕು.
ನನಗೂ ಪ್ರೇರಣೆಯ ಅಗತ್ಯವಿದೆ. ಮತ್ತು ನನ್ನ ಪ್ರೇರಣೆ ನೀವೆ. ಎಂದು ಹೇಳಿದ್ದಾರೆ. ನನ್ನ ದೇಶದ ಮಕ್ಕಳಿಗೂ ಪರಿಸರದ ಬಗ್ಗೆ ಕಾಳಜಿ ಇದೆ ಎಂಬ ಹೆಮ್ಮೆ ನನಗಿದೆ ಎಂದಿದ್ದಾರೆ ಮೋದಿ.