ಪರದೇಶದಿಂದ ಮಹಾಕುಂಭಕ್ಕೆ ವಲಸೆ ಬಂದ ಹಕ್ಕಿಗಳ ಹಿಂಡು; ಅಂತರಾಷ್ಟ್ರೀಯ ಪಕ್ಷಿ ಉತ್ಸವಕ್ಕೆ ಸಜ್ಜಾಗುತ್ತಿದೆ ಪ್ರಯಾಗ್‌ರಾಜ್

ಪರದೇಶದಿಂದ ಮಹಾಕುಂಭಕ್ಕೆ ವಲಸೆ ಬಂದ ಹಕ್ಕಿಗಳ ಹಿಂಡು; ಅಂತರಾಷ್ಟ್ರೀಯ ಪಕ್ಷಿ ಉತ್ಸವಕ್ಕೆ ಸಜ್ಜಾಗುತ್ತಿದೆ ಪ್ರಯಾಗ್‌ರಾಜ್

ಪ್ರಯಾಗರಾಜ್: ಸಾಂಸ್ಕೃತಿಕ ಪರಂಪರೆ ಮತ್ತು ಪರಿಸರ ಸಂರಕ್ಷಣೆ – ವಿಶೇಷ ಕಾರ್ಯಕ್ರಮವಾಗಿ, ಮಹಾಕುಂಭದಲ್ಲಿ ಅಂತರಾಷ್ಟ್ರೀಯ ಅಂತರಾಷ್ಟ್ರೀಯ ಪಕ್ಷಿಗಳ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಫೆಬ್ರವರಿ 16 ರಿಂದ 18 ರವರೆಗೆ ನಡೆಯಲಿರುವ ಈ ಉತ್ಸವಕ್ಕೆ ಸೂಕ್ತ ತಯಾರಿಯ ಭರದಲ್ಲಿದೆ ಪ್ರಯಾಗ್‌ರಾಜ್. ಗಂಗಾ ಮತ್ತು ಯಮುನಾ ನದಿಗಳ ತೀರದಲ್ಲಿ 200 ಕ್ಕೂ ಹೆಚ್ಚು ಜಾತಿಯ ವಿದೇಶೀ ಮೂಲದ ಪಕ್ಷಿಗಳು ಮತ್ತು ಸ್ಥಳೀಯ ಪಕ್ಷಿಗಳು ವಲಸೆ ಬಂದಿರುವ ಹಿನ್ನೆಲೆ, ಭಕ್ತಾದಿಗಳಿಗೆ ಪಕ್ಷಿ – ವೀಕ್ಷಣೆಯನ್ನು ಮಾಡುವ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಪ್ರಕೃತಿ ಪ್ರೇಮಿಗಳು, ಪಕ್ಷಿ ತಜ್ಞರು ಮತ್ತು ಭಕ್ತರಿಗೆ ಈ ಹಕ್ಕಿಗಳನ್ನು ಕಣ್ತುಂಬಿಕೊಳ್ಳುವ ಅಪರೂಪದ ಅವಕಾಶ ಲಭಿಸಲಿದೆ.

ಕುಂಭಮೇಳದಲ್ಲಿ ಹಾರಾಡುತ್ತಿರುವ ಹಕ್ಕಿಗಳ ಹಿಂಡು

ಅಂತರಾಷ್ಟ್ರೀಯ ಪಕ್ಷಿ ಉತ್ಸವವು ಪಕ್ಷಿಗಳನ್ನು ವೀಕ್ಷಿಸುವ ಅವಕಾಶವನ್ನು ನೀಡುವ ಜೊತೆಗೆ, ವಿವಿಧ ಸ್ಪರ್ಧೆಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳ ಮೂಲಕ ಪಕ್ಷಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶವನ್ನು ಹೊಂದಿದೆ. ಉತ್ಸವದಲ್ಲಿ ಛಾಯಾಗ್ರಹಣ, ಚಿತ್ರಕಲೆ, ಘೋಷವಾಕ್ಯ ರಚನೆ, ಚರ್ಚೆಗಳು ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಕೆಂಪು ಕತ್ತಿನ ಫಲರೋಪ್

ಪಕ್ಷಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸರಕಾರ ₹10,000 ರಿಂದ ₹5 ಲಕ್ಷದವರೆಗೆ ಒಟ್ಟು ₹21 ಲಕ್ಷ ಮೌಲ್ಯದ ಬಹುಮಾನಗಳನ್ನು ನೀಡಲಿದ್ದು, ಈ ಕಾರ್ಯಕ್ರಮವನ್ನು ಇನ್ನಷ್ಟು ಅರ್ಥಪೂರ್ಣವಾಗಲಿದೆ. ಇವೆಲ್ಲದರ ಜೊತೆಗೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪಕ್ಷಿತಜ್ಞರು, ಪರಿಸರವಾದಿಗಳು ಮತ್ತು ಸಂರಕ್ಷಣಾ ತಜ್ಞರು ತಾಂತ್ರಿಕ ಅಧಿವೇಶನಗಳು ಮತ್ತು ಚರ್ಚೆಗಳಲ್ಲಿ ಪಾಲ್ಗೊಂಡು, ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ. ಇದಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಬೀದಿ ನಾಟಕಗಳು, ಕಲಾ ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಪಕ್ಷಿ ಸಂರಕ್ಷಣೆ ಮತ್ತು ಪರಿಸರ ಸಮತೋಲನದ ಬಗ್ಗೆ ಜಾಗೃತಿ ಮೂಡಿಸುತ್ತವೆ.

ಭಾರತೀಯ ಸ್ಕಿಮ್ಮರ್

ಅಂತರಾಷ್ಟ್ರೀಯ ಪಕ್ಷಿ ಉತ್ಸವದ ಸಮಯದಲ್ಲಿ, ಭಕ್ತಾದಿಗಳು ಅಳಿವಿನಂಚಿನಲ್ಲಿರುವ ಭಾರತೀಯ ಸ್ಕಿಮ್ಮರ್, ರಾಜಹಂಸ ​​ಮತ್ತು ಸೈಬೀರಿಯಾ ದೇಶದ ಕೊಕ್ಕರೆ ಮುಂತಾದ ಅಪರೂಪದ ಪಕ್ಷಿಗಳನ್ನು ವೀಕ್ಷಿಸಬಹುದಾಗಿದೆ. ಆರ್ಕ್ಟಿಕ್ ವಲಸೆ ಹಕ್ಕಿ ಕೆಂಪು ಕತ್ತಿನ ಫಲರೋಪ್, ಕಪ್ಪು ಹೊಟ್ಟೆಯ ಟರ್ನ್, ಬಾರ್ಬೆಟ್, ಗಿಳಿ, ಮರಕುಟಿಗಗಳು, ಮಿಂಚುಳ್ಳಿಗಳು ಮತ್ತು ಪ್ರಯಾಗರಾಜ್‌ನಲ್ಲಿರುವ ಎಂಟು ಜಾತಿಯ ಗೂಬೆಗಳು, ಕೊಳದ ಹೆರಾನ್, ನಾನಾ ವಿಧದ ಬೆಳ್ಳಕ್ಕಿಗಳು ಕಾಣಸಿಗುತ್ತವೆ.  ಈ ಕಾರ್ಯಕ್ರಮವು ಸಂದರ್ಶಕರಿಗೆ ಪ್ರಾಕೃತಿಕ ಸೌಂದರ್ಯ ಮತ್ತು ಜೀವವೈವಿಧ್ಯದ ಮಹತ್ವವನ್ನು ಅರಿತುಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಸೈಬೀರಿಯಾ, ಮಂಗೋಲಿಯಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ 10 ಕ್ಕೂ ಹೆಚ್ಚು ದೇಶಗಳಿಂದ ಸಾವಿರಾರು ವಲಸೆ ಹಕ್ಕಿಗಳು ಪ್ರಯಾಗ್‌ರಾಜ್‌ನ ಗಂಗಾ-ಯಮುನಾ ದಡಕ್ಕೆ ಆಗಮಿಸಿದ್ದು, ತಮ್ಮ ವಿಶಿಷ್ಟ ಹಾರಾಟ ಮತ್ತು ವಲಸೆ ಮಾದರಿಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ರಾಜಹಂಸ

ಅಲೋಕ್ ಕುಮಾರ್ ಪಾಂಡೆ, ಅರಣ್ಯ ಇಲಾಖೆಯ ಐಟಿ ಮುಖ್ಯಸ್ಥರು, ಉತ್ಸವದ ಕುರಿತು ಹೆಚ್ಚಿನ ಮಾಹಿತಿಗಾಗಿ 9319277004 ಎಂಬ ವಾಟ್ಸಪ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ.

ಪರಿಸರ ಸಂರಕ್ಷಣೆಯತ್ತ ಒಂದು ಹೆಜ್ಜೆ

ಕಪ್ಪು ಹೊಟ್ಟೆಯ ಟರ್ನ್

ಪ್ರಯಾಗರಾಜ್ ವಿಭಾಗೀಯ ಅರಣ್ಯಾಧಿಕಾರಿ ಅರ್ವಿಂದ್ ಕುಮಾರ್ ಯಾದವ್ ಅವರು, “ಈ ಉತ್ಸವವು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಪರಿಸರ ಸಂರಕ್ಷಣೆಯತ್ತ ಒಂದು ಮುಖ್ಯ ಹಂತವಾಗಿದೆ” ಎಂದು ಹೇಳಿದರು. “ಹಕ್ಕಿಗಳ ಸಂರಕ್ಷಣೆಯು ಪರಿಸರ ಸಮತೋಲನ ಮತ್ತು ನೈಸರ್ಗಿಕ ವಿಪತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಅವರು ಪ್ರಸ್ತಾಪಿಸಿದರು. “ಯುವ ಜನತೆ, ಪ್ರಕೃತಿಪ್ರೇಮಿಗಳು, ಮತ್ತು ಭಕ್ತರನ್ನು ಹಕ್ಕಿಗಳು ಮತ್ತು ಅವುಗಳ ವಾಸಸ್ಥಳಗಳ ಸಂರಕ್ಷಣೆಯ ಕಡೆಗೆ ಪ್ರೇರೇಪಿಸುವುದು ಈ ಉತ್ಸವದ ಮೂಲ ಉದ್ದೇಶ” ಎಂದಿದ್ದಾರೆ.

ಪ್ರಯಾಗರಾಜ್ ಕುಂಭ ಮೇಳ ಆಡಳಿತದ ನಿರ್ದೇಶನದಂತೆ, ಭಕ್ತರ ಅನುಭವವನ್ನು ಉತ್ತಮಗೊಳಿಸಲು ವಿಶೇಷ ಪ್ರಾಕೃತಿಕ – ಪ್ರವಾಸ  ಯೋಜನೆಯನ್ನು ಸಿದ್ಧತೆ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ, ಹಕ್ಕಿಗಳ ಆವಾಸಸ್ಥಾನಗಳ ವೀಕ್ಷಣೆ, ಮಾರ್ಗದರ್ಶಕರೊಂದಿಗೆ ಪಕ್ಷಿ ವೀಕ್ಷಣಾ ಸುತ್ತಾಟ ಮತ್ತು ಹಕ್ಕಿಗಳ ಸ್ವಭಾವ, ವಲಸೆ ಮಾದರಿಗಳು ಹಾಗೂ ಪರಿಸರದಲ್ಲಿ ಅವುಗಳ ಮಹತ್ವವನ್ನು ತಿಳಿದುಕೊಳ್ಳಬಹುದಾಗಿದೆ.

ಅಂತರಾಷ್ಟ್ರೀಯ ಪಕ್ಷಿ ಉತ್ಸವವು ವೈವಿಧ್ಯತೆ ಸಂರಕ್ಷಣೆ ಕುರಿತು ಭಾರತದಲ್ಲಷ್ಟೇ ಅಲ್ಲದೇ, ಜಾಗತಿಕ ಮಟ್ಟದಲ್ಲಿಯೂ ಪ್ರಬಲ ಸಂದೇಶವನ್ನು ರವಾನಿಸಬೇಕೆಂದಿದೆ. ವಿದ್ಯಾರ್ಥಿಗಳು, ಯುವ ಜನತೆ ಮತ್ತು ಪ್ರಕೃತಿ ಪ್ರೇಮಿಗಳನ್ನು ಒಂದೇ ಕಡೆ ಸೇರಿಸಿ, ಅವರ ನಡುವೆ ಚರ್ಚೆಗಳನ್ನು ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಕಾರ್ಯಕ್ರಮವು ತಂತ್ರಜ್ಞಾನ, ವಿಜ್ಞಾನ ಮತ್ತು ಪರಿಸರ ಜವಾಬ್ದಾರಿಗಳ ನಡುವಿನ ಸಂಪರ್ಕವನ್ನು ಬಲಪಡಿಸಲಿದೆ.

ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವ ಹೊಂದಿರುವ ಮಹಾಕುಂಭ ಮೇಳ 2025 ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಅದರಲ್ಲಿ ಅಂತರಾಷ್ಟ್ರೀಯ ಪಕ್ಷಿ ಉತ್ಸವವು ಪರಿಸರ ಜಾಗೃತಿಯ ಮತ್ತೊಂದು ಆಯಾಮವನ್ನು ಸೇರಿಸುವ ಮೂಲಕ ಭಕ್ತರು ಮತ್ತು ಪ್ರವಾಸಿಗರು ಪ್ರಾಕೃತಿಕ ಸಂಪತ್ತಿನ ಮಹತ್ವವನ್ನು ಅರಿತುಕೊಳ್ಳಲು ಪ್ರೇರೇಪಿಸಲಿದೆ ಮತ್ತು ಮುಂದಿನ ಪೀಳಿಗೆಯವರಿಗೆ ಪರಿಸರವನ್ನು ಉಳಿಸಿಕೊಳ್ಳಲು ಪ್ರೇರಣೆ ನೀಡಲಿದೆ.

Uncategorized ರಾಷ್ಟ್ರೀಯ