ನವದೆಹಲಿ: ದೆಹಲಿಯಲ್ಲಿ ವಿಶ್ವ ಪುಸ್ತಕ ಮೇಳ ನಡೆಯುತ್ತಿದೆ. ಫೆಬ್ರವರಿ 1 ರಂದು ಮೇಳ ಉದ್ಘಾಟನೆಯಾಗಿದ್ದು, ಫೆಬ್ರವರಿ 9 ರ ವರೆಗೆ ನಡೆಯಲಿದೆ. ದೆಹಲಿಯ ಭಾರತ್ ಮಂಡಲಂನಲ್ಲಿ ಮೇಳದ ಆಯೋಜನೆ ಮಾಡಲಾಗಿದೆ. ಈ ಬಾರಿಯ ಪುಸ್ತಕ ಮೇಳದಲ್ಲಿ ರಷ್ಯಾದಿಂದ ಪುಸ್ತಕಗಳು ಬಂದಿರುವುದು ವಿಶಿಷ್ಟ ಸಂಗತಿ.


ಪುಸ್ತಕ ಮೇಳವನ್ನು ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ವೇದ ಮಂತ್ರಗಳಿಂದ ಕೂಡಿದ ಪವಿತ್ರ ವಾತಾವರಣದಲ್ಲಿ ಉದ್ಘಾಟಿಸಿದ್ದು, ತಮ್ಮ ಉದ್ಘಾಟನಾ ಭಾಷಣದಲ್ಲಿ “ಈ ಜಗತ್ಪ್ರಸಿದ್ಧ ಮೇಳದಲ್ಲಿ ನಾನಾ ಭಾಷೆಗಳ ಪುಸ್ತಕಗಳಿವೆ. ಅವುಗಳ ಪ್ರದರ್ಶನವೂ ವಿಶಿಷ್ಟವಾಗಿದೆ. ಮಕ್ಕಳು ಬೇರೆ ಬೇರೆ ಪುಸ್ತಕಗಳನ್ನು ಓದಬೇಕು. ಇದರಿಂದ ಅವರ ಕ್ಷಮತೆ ಹೆಚ್ಚಾಗುವುದರ ಜೊತೆಗೆ ತಮ್ಮ ತಮ್ಮ ಕ್ಷೇತ್ರವನ್ನು ಅರಿತುಕೊಳ್ಳುವುದಕ್ಕೆ ಸಹಾಯವಾಗುತ್ತದೆ” ಎಂದು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ನಮ್ಮ ರಾಷ್ಟ್ರಗೀತೆಯನ್ನು ಹಾಡಿದ್ದು, ಕಾರ್ಯಕ್ರಮಕ್ಕೆ ಒಂದು ಉತ್ತಮ ಪ್ರಾರಂಭವನ್ನು ನೀಡಿತ್ತು. ಕಾರ್ಯಕ್ರಮದಲ್ಲಿ ರಷ್ಯಾ ದೇಶದ ರಾಯಭಾರಿಗಳು ಹಿಂದಿಯಲ್ಲಿ ಮಾತನಾಡಿದ್ದರು.
40 ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿವೆ. 1000 ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ ಮತ್ತು 2000 ಕ್ಕೂ ಹೆಚ್ಚಿನ ಸ್ಟಾಲ್ಗಳನ್ನು ತೆರೆಯಲಾಗಿದೆ. ಈ ಪ್ರಸಿದ್ಧ ಮೇಳಕ್ಕೆ ಸುಮಾರು 2 ಮಿಲಿಯನ್ ಪುಸ್ತಕಾಭಿಮಾನಿಗಳು ಭೇಟಿಯಾಗುವ ಸಾಧ್ಯತೆ ಇದೆ.
ಪುಸ್ತಕ ಮೇಳದಲ್ಲಿ ವಿವಿಧ ವಯೋಮಿತಿಯ ಜನರನ್ನು ಆಕರ್ಷಿಸುವಂತೆ ಸ್ಟಾಲ್ಗಳನ್ನು ತೆರೆಯಲಾಗಿದೆ. ಭಾರತವು 75 ನೇ ವರ್ಷದ ಸಂವಿಧಾನ ದಿನಾಚರಣೆಯನ್ನು ಆಚರಿಸುತ್ತಿರುವುದರಿಂದ, “ಹಮಾರೇ ಲೋಗ್” ಎಂಬ ಶೀರ್ಷಿಕೆಯ ಅಡಿಯಲ್ಲಿ “ಸಂವಿಧಾನ ಗ್ಯಾಲರಿ“ಯನ್ನು ಸಿದ್ಧಪಡಿಸಲಾಗಿದೆ. ಮಕ್ಕಳಿಗಾಗಿ “ಬಾಲ ಮಂಡಪ್” ಅನ್ನು ವಿಶೇಷವಾಗಿ ಆಯೋಜಿಸಲಾಗಿದ್ದು, ಅದರಲ್ಲಿ, ಅನೇಕ ಬಾಲ ಸಾಹಿತ್ಯ ಪುಸ್ತಕಗಳು, ಕಥೆ, ಕವನಗಳು, ಅನೇಕ ಕಲಿಕಾ ಪುಸ್ತಕಗಳನ್ನು ಇಡಲಾಗಿದೆ. ಮಕ್ಕಳಿಗಾಗಿಯೇ ಆಯೋಜಿಸಲಾದ “ಭಾರತ – ರಷ್ಯಾ ನಡುವಿನ ಸಂಬಂಧ” ಎಂಬ ಕಾರ್ಟೂನ್ ಕಥೆಗಳ ಪ್ರದರ್ಶನವು ಎಲ್ಲರನ್ನೂ ಮೋಡಿ ಮಾಡಿತು.

ಪುಸ್ತಕ ಮೇಳಕ್ಕೆ ಬರಲು ಇಚ್ಛಿಸುವ ಅಭಿಮಾನಿಗಳಿಗೆ ಅನುಕೂಲವಾಗುವಂತೆ, ದೆಹಲಿ ಕ್ಷೇತ್ರದ 20 ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಟಿಕೆಟ್ಗಳು ಲಭ್ಯವಿವೆ. ಸಮವಸ್ತ್ರದಲ್ಲಿರುವ ಶಾಲಾ ಮಕ್ಕಳು, ಹಿರಿಯ ನಾಗರೀಕರು ಮತ್ತು ದಿವ್ಯಾಂಗರಿಗೆ ಉಚಿತ ಪ್ರವೇಶವಿರುತ್ತದೆ.
