
ಮಣಿಪಾಲ: ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ವ್ಯಕ್ತಿಯೊಬ್ಬರನ್ನು ವಂಚಿಸಿದ ಘಟನೆ ನಡೆದಿದೆ. 80 ಬಡಗಬೆಟ್ಟು ನಿವಾಸಿ ರವೀಂದ್ರ ವಂಚನೆಗೆ ಒಳಗಾದವರು. ನ. 6ರಂದು ಮಣಿಪಾಲದಲ್ಲಿರುವಾಗ ಅವರಿಗೆ ಅನಾಮಧೇಯ ವೀಡಿಯೋ ಕರೆ ಬಂದಿತ್ತು.

ನಾವು ಪೊಲೀಸ್ ಅಧಿಕಾರಿಗಳು ಎಂದು ಹೇಳಿದ್ದು, ನಿಮ್ಮ ಆಧಾರ್ ನಂಬರ್ ಅನ್ನು ಡ್ರಗ್ಸ್ ಕೇಸಿನಲ್ಲಿ ಉಪಯೋಗಿಸಲಾಗಿದೆ. ಉತ್ತರ ಪ್ರದೇಶ ರಾಜ್ಯದ ಅಲಂಬಾಗ್ ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿಸಿದ್ದರು.
ವೀಡಿಯೋ ಕಾಲ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿದ್ದರು. ಅವರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ಬೇರೆ ಬೇರೆ ಕೇಸುಗಳಿವೆ. ದೇಶದ್ರೋಹ ಕೇಸಿನಲ್ಲಿ ಕೂಡ ನಿಮ್ಮ ಆಧಾರ್ ಸಂಖ್ಯೆ ಇದೆ. ಅದಕ್ಕೆ ನಿಮ್ಮ ಬ್ಯಾಂಕ್ ಖಾತೆಯ ವಿವರ, ಅಕೌಂಟ್ ಪರಿಶೀಲನೆ ನಡೆಯಬೇಕು ಎಂದು ಹೇಳಿ ಬೇರೆ ಅಕೌಂಟ್ ಸಂಖ್ಯೆ ಕಳುಹಿಸಿ ಆ ಖಾತೆಗೆ 2.19 ಲಕ್ಷ ರೂ. ವರ್ಗಾಯಿಸಬೇಕು.
ಶುಲ್ಕ ವಸೂಲು ಮಾಡಿ ಉಳಿದ ಹಣ ವಾಪಸು ನೀಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ರವೀಂದ್ರ ಅವರು 2.19 ಲಕ್ಷ ರೂ. ವರ್ಗಾಯಿಸಿದ್ದರು. ಆದರೆ ಆರೋಪಿಗಳು ಅದನ್ನು ಹಿಂದಿರುಗಿಸದೆ ವಂಚನೆ ಎಸಗಿದ್ದಾರೆ ಎಂದವರು ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
