ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾದ ಚಳಿ; ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಮೋಡ!

ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾದ ಚಳಿ; ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಮೋಡ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಧಾನವಾಗಿ ಹವಾಮಾನ ಬದಲಾಗುತ್ತಿದೆ. ಮುಂಜಾನೆಯ ಚಳಿ ಮೆಲ್ಲನೆ ಏರುತ್ತಿದ್ದಂತೆ ಮಧ್ಯಾಹ್ನ ಬಿಸಿಲು ಕೂಡ ಕಾಣಿಸಿಕೊಂಡು ಹವಾಮಾನ ಆರೋಗ್ಯಕ್ಕೆ ಪೂರಕವಾಗಿ ನಿಲ್ಲದೇ ವೈರಲ್ ಕಾಯಿಲೆಗಳಿಗೆ ವೇದಿಕೆಯಾಗುತ್ತಿದೆ.

ಡಿಸೆಂಬರ್, ಜನವರಿ ತಿಂಗಳಲ್ಲಿ ಚಳಿಗಾಲ ಸಾಮಾನ್ಯವಾಗಿ ಆರಂಭವಾಗುತ್ತದೆ. ಆದರೆ ಈ ಬಾರಿ ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಚಳಿ ತುಸು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿತ್ತು. ಆರೋಗ್ಯ ಇಲಾಖೆ ಕೂಡ ಈಗಾಗಲೇ ಜನರು ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ ಎಂದು ಮಾಹಿತಿ, ಜಾಗೃತಿಯನ್ನು ನೀಡುವ ಕೆಲಸವನ್ನು ಮಾಡುತ್ತಿದ್ದರೂ ಕೂಡ ಜನರ ಆರೋಗ್ಯವಂತೂ ನೆಟ್ಟಗೆ ನಿಲ್ಲುತ್ತಿಲ್ಲ. ಪದೇ ಪದೇ ಚಳಿಯಿಂದಾಗಿ ಶೀತ, ಜ್ವರ, ಕೆಮ್ಮು, ಅಸ್ತಮಾದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ವೈದ್ಯರ ಬಳಿಗೆ ಹೋಗಿ ನಿಂತು ಔಷಧ ಪಡೆದುಕೊಳ್ಳುವ ಸಂಖ್ಯೆ ಕೂಡ ಹೆಚ್ಚಳಗೊಂಡಿದೆ.

ಕರಾವಳಿಯಲ್ಲಿ ಚಳಿ ಇಳಿಕೆ ಸಾದ್ಯತೆ:ಉತ್ತರ ಭಾರತದಿಂದ ಬೀಸುತ್ತಿರುವ ಗಾಳಿ ಕಡಿಮೆಯಾಗಿ ಬಂಗಾಳಕೊಲ್ಲಿಯ ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಮಾಣ ಜಾಸ್ತಿಯಾಗುವ ಕಾರಣ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಉಂಟಾಗಲಿದೆ. ಇದರಿಂದ ಚಳಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಜ.13ರಂದು ಕರಾವಳಿ, ಮಲೆನಾಡು ಭಾಗದಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಈ ಬಳಿಕ ಚಳಿಯ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದ್ದು, ವಾತಾವರಣದಲ್ಲಿ ತೇವಾಂಶ ಇದ್ದರೆ ಚಳಿ ಕಡಿಮೆಯಾಗಬಹುದು ಆದರೆ ಒಣಹವೆ ಇದ್ದರೆ ಮಾತ್ರ ಚಳಿ ಏರಿಕೆಯಾಗಲಿದೆ.

ರಾಜ್ಯ ಹವಾಮಾನ ವರದಿ