
2024ರ ಡಿಸೆಂಬರ್ 11ರಂದು ಭಾರತ, ಫ್ರಾನ್ಸ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳ ವಾಯುಪಡೆಗಳು ಅರಬ್ಬಿ ಸಮುದ್ರದ ಮೇಲೆ “ಡೆಸರ್ಟ್ ನೈಟ್” ಎಂಬ ತ್ರಿಪಕ್ಷೀಯ ವಾಯು ಸಮರಾಭ್ಯಾಸವನ್ನು ನಡೆಸಿದವು. ಈ ಅಭ್ಯಾಸವು ಡಿಸೆಂಬರ್ 11 ರಿಂದ ಪ್ರಾರಂಭವಾಗಿ 13 ರವರೆಗೆ ನಡೆಯಿತು. ಮೂರು ದೇಶಗಳ ವಾಯುಪಡೆಗಳ ನಡುವಿನ ಪರಸ್ಪರ ಕಾರ್ಯಸಾಧ್ಯತೆ ಮತ್ತು ಸಹಕಾರವನ್ನು ಸುಧಾರಿಸುವುದು ಈ ಕಾರ್ಯದ ಮುಖ್ಯ ಉದ್ದೇಶವಾಗಿತ್ತು.

ಭಾರತೀಯ ವಾಯುಪಡೆ ವಿಮಾನಗಳು ಭಾರತದ ಪಶ್ಚಿಮ ಕರಾವಳಿಯಿಂದ ಕಾರ್ಯನಿರ್ವಹಿಸಿದವು. ವಾಯುಪಡೆಯ ಸುಖೋಯ್ – 30 ಎಂಕೆಐ, ಮಿಗ್ –29 ಮತ್ತು ಜಾಗ್ವಾರ್ ಯುದ್ಧ ವಿಮಾನಗಳು ಈ ಸಮರಾಭ್ಯಾಸದಲ್ಲಿ ಭಾಗವಹಿಸಿದವು. ಫ್ರಾನ್ಸ್ ಮತ್ತು ಯುಎಇ ವಾಯುಪಡೆಗಳ ಯುದ್ಧ ವಿಮಾನಗಳೂ ಸಹ ಈ ಅಭ್ಯಾಸದಲ್ಲಿ ಪಾಲ್ಗೊಂಡವು.
ಮೂರು ದೇಶಗಳ ವಾಯುಪಡೆಗಳ ನಡುವಿನ ಸಹಯೋಗ ಮತ್ತು ಪರಸ್ಪರ ಕಾರ್ಯಸಾಧ್ಯತೆಯ ಸುಧಾರಣೆ ಈ ಅಭ್ಯಾಸದ ಮೂಲ ಉದ್ದೇಶವಾಗಿತ್ತು. ಇಂತಹ ಸಮರಾಭ್ಯಾಸಗಳು ಈ ಪ್ರದೇಶದಲ್ಲಿ ಬೆಳೆಯುತ್ತಿರುವ ರಾಜತಾಂತ್ರಿಕ ಮತ್ತು ಸೈನಿಕ ಸಂವಹನಗಳನ್ನು ಮತ್ತು ಭಾರತೀಯ ವಾಯುಪಡೆಯ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
