

ಮಂಗಳೂರು ಜನವರಿ 28: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆ ಮಂಗಳೂರು ಪೊಲೀಸ್ ಕಮಿಷನರ್ಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಲಾಗಿದೆ. ಫೆಬ್ರವರಿ 14ರೊಳಗೆ ತನಿಖಾ ವರದಿ, ದಾಖಲೆ ಸಹಿತ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್, ಎಸ್ಐ ಪ್ರದೀಪ್ ವಿರುದ್ದ ಸಾಮಾಜಿಕ ಕಾರ್ಯಕರ್ತ ಉಳ್ಳಾಲದ ಮೊಹಮ್ಮದ್ ಕಬೀರ್ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಈ ದೂರಿನ ಆಧಾರದ ಮೇಲೆ ಲೋಕಾಯುಕ್ತರು ಮಂಗಳೂರು ಪೊಲೀಸ್ ಕಮಿಷನರ್ಗೆ ನೋಟಿಸ್ ನೀಡಿದ್ದಾರೆ. ಹಾಗೂ ತನಿಖಾ ವರದಿ, ದಾಖಲೆ ಸಹಿತ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
ಇನ್ಸ್ಪೆಕ್ಟರ್, ಎಸ್ಐ ವಿರುದ್ಧ ಹಣ ವಸೂಲಿ ಸೇರಿ ಹಲವು ಆರೋಪಗಳನ್ನು ಕಬೀರ್ ಮಾಡಿದ್ದಾರೆ. ಬ್ರೋಕರ್ ಹಮೀದ್ ಎಂಬುವನ ಮೂಲಕ ಹಣ ವಸೂಲಿ ಆರೋಪ. ಗಾಂಜಾ ಮಾಫಿಯಾ, ಮರಳು ಮಾಫಿಯಾಗಳಿಂದ ಹಣ ವಸೂಲಿ. ಹೋಟೆಲ್ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ. ಹಾಗೂ ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಂತರ ಸಂಪಾದನೆ ಮಾಡಿದ್ದಾರೆ. ಚಿನ್ನದ ಅಂಗಡಿ ದರೋಡೆ ಕೇಸ್ನಲ್ಲಿ ಜಪ್ತಿ ಮಾಡಿದ ಚಿನ್ನ ಮತ್ತು ಬೆಳ್ಳಿಯನ್ನು ಇನ್ಸ್ ಪೆಕ್ಟರ್ ಸಂದೀಪ್ ಎಗರಿಸಿದ್ದಾರೆ ಎಂದು ದೂರಿನಲ್ಲಿ ಕಬೀರ್ ಉಲ್ಲೇಖಿಸಿದ್ದಾರೆ. ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧವೂ ಆರೋಪ ಮಾಡಿದ್ದಾರೆ. ಕಮಿಷನರ್ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ಮೊಹಮ್ಮದ್ ಕಬೀರ್ ದೂರು ನೀಡಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಲಂ.9 ರಡಿಯಲ್ಲಿ ತನಿಖೆ ನಡೆಸುವುದು ಸೂಕ್ತ ಎಂದು ಕರ್ನಾಟಕ ಲೋಕಾಯುಕ್ತ ನೋಟಿಸ್ ನೀಡಿದ್ದು 2023ರ ಫೆ.14 ರ ಒಳಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಪೊಲೀಸ್ ಕಮೀಷನರ್ ಶಶಿಕುಮಾರ್ ಗೆ ನೋಟಿಸ್ ಜಾರಿ ಮಾಡಿದ್ದಾರೆ