ಇಷ್ಟು ವರ್ಷದಲ್ಲಿ ಸುಳ್ಯದವರಾದ ಡಿ.ವಿ., ಶೋಭಾ , ಕಟೀಲ್ ರಿಂದ ಸುಳ್ಯಕ್ಕೆ ಸಿಕ್ಕಿದ ಕೊಡುಗೆ ಏನು: ಸುಳ್ಯದಲ್ಲಿ ಧನಂಜಯ ಅಡ್ಪಂಗಾಯ ಪ್ರಶ್ನೆ.


ಕಳೆದ ೫ ವರ್ಷದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕೇತ್ರಕ್ಕೆ ಮೂರುವರೆ ಸಾವಿರ ಕೋಟಿ ಅನುದಾನ , ಪುತ್ತೂರಿನ ಅಭಿವೃದ್ಧಿಗೆ ಎರಡೂವರೆ ಸಾವಿರ ಕೋಟಿ ಅನುದಾನ ತರಿಸಿವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ಆದರೆ ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಕೇವಲ 150 ರಿಂದ 200 ಕೋಟಿ ಮಾತ್ರ ಬಂದಿದೆಎಂದು ಹೇಳುವ ಸುಳ್ಯದ ಬಿಜೆಪಿಯವರು ಸುಳ್ಯಕ್ಕೆ ಯಾಕೆ ಕಡಿಮೆ ಅನುದಾನ ಎಂದು ಕೇಳುತ್ತಿಲ್ಲ.. ಇಲ್ಲಿಗೆ ಇದು ಸಾಕೇ? ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರು ಪ್ರಶ್ನೆ ಮಾಡಿದ್ದಾರೆ.

ಮೇ.5ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಳ್ಯ ಕ್ಷೇತ್ರಕ್ಕೆ ಯಾಕೆ ಇಷ್ಟು ಕಡಿಮೆ ಅನುದಾನ ಬಂದಿದೆ? ಅಧಿಕಾರದ ವಿಚಾರದಲ್ಲಿ ಸುಳ್ಯ ಕಾಂಗ್ರೆಸ್‌ಗೆ ಮೀಸಲಾತಿ ಎಂದು ಹೇಳಿದರೂ ಬಿಜೆಪಿಗರಿಗೆ ಹಾಗಲ್ಲವಲ್ಲ. ಸುಳ್ಯದವರಾದ ಡಿ.ವಿ.ಸದಾನಂದ ಗೌಡರು, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಎಲ್ಲರೂ ಸುಳ್ಯದವರೇ ಅವರು ಸುಳ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಡಿ.ವಿ.ಯವರು ಮುಖ್ಯಮಂತ್ರಿಯಾಗಿದ್ದವರು. ಅವರ ದೇವರಗುಂಡದಿಂದ ಮಂಡೆಕೋಲು ಗ್ರಾಮ ಪಂಚಾಯತ್‌ಗೆ ಹೋಗುವ ರಸ್ತೆ ವ್ಯವಸ್ಥೆಯೇ ಸರಿ ಇಲ್ಲ ಎಂದು ಅಡ್ಪಂಗಾಯರು ಟೀಕಿಸಿದರು. ಶೋಭಾ ಕರಂದ್ಲಾಜೆಯವರು ಹಿಂದೆ ವಿದ್ಯುತ್ ಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಯಾಕೆ ಸುಳ್ಯಕ್ಕೆ ೧೧೦ ಕೆ.ವಿ. ತರಿಸಲು ಅವರು ಪ್ರಯತ್ನಿಸಿಲ್ಲ. ಈಗ ಕೇಂದ್ರದ ಕೃಷಿ ಮಂತ್ರಿಯಾಗಿದ್ದಾರೆ. ಇಲ್ಲಿಯ ಅಡಿಕೆ ಕೃಷಿಕರನ್ನು ಬಾಧಿಸುತ್ತಿರುವ ಅಡಿಕೆ ಎಲೆ ಹಳದಿ ರೋಗ, ಎಲೆ ಚುಕ್ಕೆ ರೋಗಕ್ಕೆ ಏನು ಪರಿಹಾರ ತಂದಿದ್ದಾರೆ ಎಂದು ಹೇಳಲಿ ಎಂದು ಪ್ರಶ್ನಿಸಿದರು. ನಳಿನ್ ಕಟೀಲ್ ರು ೩ ಬಾರಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದವರು. ಅವರು ಸುಳ್ಯಕ್ಕೆ ಕೊಟ್ಟ ಕೊಡುಗೆ ಏನು ಹೇಳಲಿ ನೋಡೋಣ. ಬಳ್ಪ ಆದರ್ಶ ಗ್ರಾಮ ಏನಾಗಿದೆ. ಯಾವುದಕ್ಕೆ ಆದರ್ಶವಾಗಿದೆ ಎಂದು ಪ್ರಶ್ನಿಸಿದರಲ್ಲದೆ, ಈ ಎಲ್ಲ ನಾಯಕರು ಹಾಗೂ ಬಿಜೆಪಿಯವರು ಪ್ರಧಾನಿ ಮೋದಿಯವರ ಮುಖ ನೋಡಿ ಓಟು ಕೊಡಿ ಎಂದು ಕೇಳುವಾಗ ಅಡಿಕೆ ಕಳ್ಳ ಸಾಗಾಟ ನಿಲ್ಲಿಸಿ, ಇಲ್ಲಿ ಅಡಿಕೆ ಕೃಷಿಕರಿಗೆ ಸಹಕಾರಿಯಾಗುತ್ತದೆ ಎಂದು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು. ನಮ್ಮ ಅಭ್ಯರ್ಥಿ ಯನ್ನು ಸುಳ್ಯದ ಜನರು ಗೆಲ್ಲಿಸಿದರೆ ಸುಳ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ , ನಿರ್ವಹಣೆ ಇಲ್ಲದಿರುವ ಓಡಾಬಾಯಿ ತೂಗುಸೇತುವೆ ಸರಿಪಡಿಸುತ್ತೇವೆ, ಸುಳ್ಯಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಾಡಲಾಗುವುದು ಸುಳ್ಯದ ೧೧೦ ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಕಾಮಗಾರಿ ಆರಂಭ ಮಾಡಲಾಗುವುದು ಹೀಗೆ ಸುಳ್ಯದ ರಸ್ತೆ, ಸೇತುವೆಗಳನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ನಾವು ಭರವಸೆ ನೀಡುತ್ತಿಲ್ಲ. ಕೆಲಸ ಮಾಡಿಯೇ ಮಾಡುತ್ತೇವೆ ಎಂದು ವಿಶ್ವಾಸ ಇದೆ. ನಮ್ಮ ಅಭ್ಯರ್ಥಿ ಅಷ್ಟು ಸಮರ್ಥರಿದ್ದಾರೆ ಎಂದು ಹೇಳಿದರು. ಕ್ಷೇತ್ರದಲ್ಲಿ ಸಾಕಷ್ಟು ಕಡೆ ಮೂಲಭೂತ ಸೌಕರ್ಯ, ರಸ್ತೆ ಇಲ್ಲವೆಂದು ಮತದಾನ ಬಹಿಷ್ಕಾರದ ಬ್ಯಾನರ್ ಹಾಕಿದ್ದಾರೆ. ಅವರಲ್ಲಿಗೆ ಹೋಗಿ ನಾವು ಮಾತನಾಡಿ ಸಮಸ್ಯೆ ಇತ್ಯರ್ಥ ಮಾಡುತ್ತೇವೆ. ಆ ಕೆಲಸ ಮಾಡಿಕೊಡುತ್ತೇವೆ ಎಂದು ಹೇಳಿದರು. ನಾನು ಅಂಗಾರರು ಬಗ್ಗೆ ಮಾತನಾಡುವುದಿಲ್ಲ . ಬೆಳ್ತಂಗಡಿ, ಪುತ್ತೂರಿಗೆ ಅನುದಾನ ಬರಲು ಈ ಮೂವರು ನಾಯಕರು ಅಲ್ಲಿಯವರಿಗೆ ಶಕ್ತಿ ತುಂಬಿದ್ದರೆ, ಇವರಿಗೆ ಶಕ್ತಿ ಯಾಕೆ ಕೊಟ್ಟಿಲ್ಲ ಎಂಬುದೇ ಪ್ರಶ್ನೆ. ಕೆ.ಪಿ.ಸಿ.ಸಿ. ವಕ್ತಾರ ಟಿ.ಎಂ. ಶಹೀದ್ ತೆಕ್ಕಿಲ್ ಮಾತನಾಡಿ, ಸುಳ್ಯ ಅಭಿವೃದ್ಧಿ ಆಗಬೇಕೆಂದು ಜನರು ಹೇಳುತ್ತಿದ್ದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ” ಎಂದು ಹೇಳಿದರು. ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ಸುಳ್ಯ ಕ್ಷೇತ್ರದಲ್ಲಿ ಪ ಜಾತಿ ಕಾಲೋನಿಗಳು ಇನ್ನು ಅಭಿವೃದ್ಧಿ ಆಗಿಲ್ಲ. ರಸ್ತೆ, ನೀರಿನ ಸಮಸ್ಯೆ ಎಲ್ಲ ಕಡೆಯಲ್ಲಿಯೂ ಇದೆ. ಗ್ರಾಮ ವ್ಯಾಪ್ತಿಯಲ್ಲಿ ಇಲ್ಲಿನ ಎಂ.ಎಲ್.ಎ. ಮಾಡಲಾಗದ ಕೆಲಸವನ್ನು ಧನಂಜಯ ಅಡ್ಪಂಗಾಯ, ಟಿ.ಎಂ. ಶಹೀದ್ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು. ಸುಳ್ಯ ಭಾಗದಲ್ಲಿ ಇದ್ದಷ್ಟು ಮತದಾನ ಬಹಿಷ್ಕಾರದ ಬ್ಯಾನರ್ ಇತರ ಕಡೆ ಇಲ್ಲ, ಇದರಿಂದಲೇ ಗೊತ್ತಾಗುತ್ತದೆ ಸುಳ್ಯದಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂದು” ಎಂದು ಸುರೇಶ್ ಎಂ.ಎಚ್. ಹೇಳಿದರು.
ಕಾಂಗ್ರೆಸ್ ಹಿಂದುಳಿದ ಘಟಕಗಳ ಅಧ್ಯಕ್ಷ ಮುತ್ತಪ್ಪ ಪೂಜಾರಿ ಉಪಸ್ಥಿತರಿದ್ದರು.