ಪುತ್ತೂರು : ಸಂಜೀವ ಮಠಂದೂರು ಮನೆಗೆ ತೆರಳಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರಿಗೆ ದಿಗ್ಬಂಧನ.


ಪುತ್ತೂರು ಟಿಕೆಟ್ ವಂಚಿತರಾಗಿರುವ ಸಂಜೀವ ಮಠಂದೂರು ಅವರನ್ನು ಭೇಟಿಯಾಗಲು ಅವರ ಮನೆಗೆ ತೆರಳಿದ್ದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರನ್ನು ಮಠಂದೂರು ಅವರ ಬೆಂಬಲಿಗರು ಅವಮಾನಿಸಿರುವ ಘಟನೆ ನಡೆದಿದೆ.ಸುದರ್ಶನ್ ಅವರು ಮನೆಯೊಳಗೆ ಪ್ರವೇಶಕ್ಕೂ ಮುನ್ನ ಅವರನ್ನು ತಡೆದ ಕಾರ್ಯಕರ್ತರು ಟಿಕೆಟ್ ನಿರಾಕರಿಸಲು ಕಾರಣ ಹೇಳುವಂತೆ ತಾಕೀತು ಮಾಡಿದರು. ಅಲ್ಲದೇ ನಿಮ್ಮ ಪಕ್ಷದ ನಿರ್ಧಾರದಿಂದ ಸಂಸಾರ ಹಾಳಾಗಿದೆ. ಇದಕ್ಕೆಲ್ಲಾ ನೀವು ಉತ್ತರ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದಕ್ಕೆ ಪ್ರತಿಯಾಗಿ ಸುದರ್ಶನ್ ಕೂಡ ತನ್ನ ಮನಸ್ಸಿನ ಮಾತು ಹೊರಹಾಕಿದ್ದು, ನನಗೂ ಮೂರು ಬಾರಿಯಿಂದಲೂ ಟಿಕೆಟ್ ನೀಡದೇ ವಂಚಿಸಲಾಗುತ್ತಿದೆ. ಹಾಗೆಂದು ನಾನೂ ಕೂಡ ಪಕ್ಷ ಬಿಡಲು ಆಗುತ್ತದೆಯೇ ಎಂದು ಬೇಸರ ತೋಡಿಕೊಂಡಿದ್ದು ವಿಡಿಯೋದಲ್ಲಿ ದಾಖಲಾಗಿದೆ.
ಘಟನೆಯ ದೃಶ್ಯವನ್ನು ರೆಕಾರ್ಡ್ ಮಾಡದಂತೆ ಸುದರ್ಶನ್ ಅವರು ತಡೆಯಲು ಯತ್ನಿಸಿದರೂ ಅವರ ಮಾತನ್ನು ಕೇಳುವವರು ಅಲ್ಲಿ ಯಾರೂ ಇರಲಿಲ್ಲ. ಬಿಜೆಪಿಯ ಜಿಲ್ಲಾಧ್ಯಕ್ಷನಾದರೂ ಅವರ ಮಾತಿಗೆ ಬೆಲೆಕೊಡದೇ ಅವರನ್ನು ಹೀಯಾಳಿಸಿ ಅವಮಾನಿಸಿದ್ದು ದಕ್ಷಿಣ ಕನ್ನಡ ಬಿಜೆಪಿಯ ಒಳಸುಳಿಯನ್ನು ಮತ್ತೊಮ್ಮೆ ತೆರೆದಿಟ್ಟಂತಾಗಿದೆ.