

ಸ್ನಾನಕ್ಕೆಂದು ತೆರಳಿದ ವ್ಯಕ್ತಿಯೊಬ್ಬರು ಸಂಜೆಯ ವೇಳೆಗೆ ಶವವಾಗಿ ಪತ್ತೆಯಾಗಿರುವ ಘಟನೆ ಎ.30 ರಂದು ಸುಳ್ಯ ಸಮೀಪದ ಅರಂಬೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಅರಂಬೂರು ಮಜಿಗುಂಡಿ ನಿವಾಸಿ ನಿವೃತ್ತ ಶಿಕ್ಷಕ ದಿನೇಶ್ .ಕೆ (65) ಎಂದು ಗುರುತಿಸಲಾಗಿದೆ.

ಇವರು ಬೆಳಿಗ್ಗೆ ಮನೆಯಿಂದ ಸ್ನಾನ ಮಾಡಲೆಂದು ಪಯಸ್ವಿನಿ ನದಿಗೆ ಹೋದವರು ಬಹಳ ಹೊತ್ತು ಕಳೆದರೂ ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಮತ್ತು ಸ್ಥಳೀಯರಿಗೆ ವಿಷಯ ತಿಳಿಸಿದ್ದರು. ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ ಸಂಜೆ ವೇಳೆ ಅವರ ಮೃತ ದೇಹ ಮಜಿಗುಂಡಿ ಎಂಬಲ್ಲಿ ನದಿಯಲ್ಲಿ ತೇಲಿಕೊಂಡಿರುವುದು ಪಕ್ಕದ ಮನೆಯವರ ಗಮನಕ್ಕೆ ಬಂದಿದ್ದು ಸ್ಥಳೀಯ ಪಂಚಾಯತ್ ಸದಸ್ಯ ರತೀಶನ್ ಮತ್ತು ಸುದೇಶ್ ರವರು ಸುಳ್ಯ ಪೋಲಿಸರಿಗೆ ವಿಷಯ ತಿಳಿಸಿದರು.

ಸ್ಥಳಕ್ಕೆ ಬಂದ ಸುಳ್ಯ ಪೊಲೀಸರ ಉಪಸ್ಥಿತಿಯಲ್ಲಿ ವಿಪತ್ತು ನಿರ್ವಹಣಾ ಘಟಕ ಹಾಗೂ ಸ್ಥಳೀಯರು ನದಿಗೆ ಇಳಿದು ಶವವನ್ನು ಮೇಲೆಕ್ಕೆತ್ತಿದ್ದಾರೆ.
ಮೃತರು ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆಂದು ತಿಳಿದು ಬಂದಿದೆ. ದಿನೇಶ್ ರವರು ಅಡ್ಕಾರ್, ಅರಂಬೂರು, ಅರಂತೋಡು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು, 2020 ರಲ್ಲಿ ನಿವೃತ್ತಿ ಹೊಂದಿದ್ದರು.
