

ಕಡಬ ಜೂನ್ 10: ಮಾಠಮಂತ್ರದ ಮೂಲಕ ಜನರ ಕಷ್ಟ ಬಗೆಹರಿಸುವ ಸೋಗಿನಲ್ಲಿ ಓಡಾಡಿಕೊಂಡಿದ್ದ ಕಡಬದ ನಕಲಿ ಮಂತ್ರವಾದಿ ಮತ್ತು ಆತನ ಸಹಚರನನ್ನು ಮನೆಯೊಂದರಲ್ಲಿ ಕೂಡಿಹಾಕಿ ಯುವಕರ ತಂಡವೊಂದು ಧರ್ಮದೇಟು ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ

ಪುತ್ತೂರಿನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ವಳಾಲು ಪರಿಸರದಲ್ಲಿ ಈ ಘಟನೆ ನಡೆದಿದ್ದು, ಠಾಣೆಯ ಮೆಟ್ಟಿಲೇರಿದ ಬಳಿಕ ಮಾತುಕತೆಯ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ. ಕಡಬ ಕೋಡಿಂಬಾಳ ಗ್ರಾಮದ ನಿವಾಸಿಗಳಾದ ಆಲಿ ಮತ್ತು ಮಮ್ಮು ಎಂಬವರು ಈ ಹಿಂದೆ ಗುಜರಿ ವ್ಯವಹಾರ ಮಾಡುತ್ತಿದ್ದರು. ಬಳಿಕ ಮಂತ್ರವಾದಿಯ ಮುಖವಾಡದಲ್ಲಿ ಹಲವೆಡೆ ಪರಿಚಿತರಾಗಿದ್ದರು. ಹೀಗಾಗಿ ಉಪ್ಪಿನಂಗಡಿ ಸಮೀಪದ ಮಗುವಿಗೆ ಆರೋಗ್ಯ ಸಮಸ್ಯೆ ಕಂಡು ಬಂದ ಕಾರಣ ಮುಸ್ಲಿಂ ಸಮುದಾಯಕ್ಕೆ ಸೇರಿದ ಕುಟುಂಬವೊಂದು ಮಂತ್ರದ ಹೆಸರಿನಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಹೀಗಾಗಿ ವಾರದ ಹಿಂದೆ ಮನೆಗೆ ಹೋಗಿ ಕಪ್ಪು ನೂಲು ಮಂತ್ರಿಸಿ ಮಗುವಿಗೆ ಕಟ್ಟಿದ್ದ .ಈ ವೇಳೆ ನಕಲಿ ಮಂತ್ರವಾದಿಯ ಪರಿಚಯದ ವ್ಯಕ್ತಿ ಅದೇ ಮನೆಗೆ ಬಂದಿದ್ದು ಆತ ಈ ಸನ್ನಿವೇಶ ನೋಡಿ ಅಚ್ಚರಿಗೊಂಡಿದ್ದ ಎನ್ನಲಾಗಿದೆ.
ನಂತರ ಮಾತಿಗೆ ಮಾತು ಬೆಳೆದು ಮಂತ್ರವಾದದ ಹೆಸರಿನಲ್ಲಿ ಮೋಸ ಮಾಡುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಯುವಕರು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಾ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ