ಇಂದು ತಿಮರೋಡಿ ನೇತ್ರತ್ವದಲ್ಲಿ ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ – ಅತ್ಯಧಿಕ ಜನಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಹಿನ್ನಲೆ ಮಾರ್ಗ ಬದಲಾಯಿಸಿ ಜಿಲ್ಲಾಡಳಿತ ಆದೇಶ


ಮಂಗಳೂರು : ಸೆ 3 : ಸೌಜನ್ಯ ಪರ ಹೋರಾಟದ ಮುಂಚೂಣಿ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ಅಧ್ಯಕ್ಷರಾಗಿರುವ ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಕು. ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಂಗದ ಸುಪರ್ಧಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಸಭೆಯನ್ನು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಸೆ 3 ರಂದು ಆಯೋಜಿಸಿದೆ. ಈ ಹಿನ್ನಲೆಯಲ್ಲಿ ಬೆಳ್ತಂಗಡಿಯಲ್ಲಿ ವಾಹನ ಸಂಚಾರ ನಡೆಸುವ ರಸ್ತೆಯಲ್ಲಿ ಬದಲಾವಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸುತ್ತಾರೆ

ಸೆ .3ರಂದು ಬೆಳಿಗ್ಗೆ 9.00 ಗಂಟೆಯಿಂದ ಮದ್ಯಾಹ್ನ 3.00 ಗಂಟೆಯವರೆಗೆ ಈ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ. ಈ ಪ್ರತಿಭಟನಾ ಸಭೆಗೆ ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ಮಾನವ ಹಕ್ಕು ಆಯೋಗದ ಗೀತಾ ಹಾಗೂ ಒಡನಾಡಿ ಸಂಸ್ಥೆಯ ಮುಖ್ಯಸ್ಥರು. ರಾಜ್ಯ ಒಕ್ಕಲಿಗ ಸಂಘದ ಮುಖ್ಯಸ್ಥರು ಮುಂತಾದವರು ಭಾಗವಹಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ಅತ್ಯಧಿಕ ಜನಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ಸುಗಮ ವಾಹನ ಸಂಚಾರದ ಹಿನ್ನಲೆಯಲ್ಲಿ ರಸ್ತೆ ಬದಲಾವಣೆ ಮಾಡುವಂತೆ ಬೆಳ್ತಂಗಡಿ ತಾಲ್ಲೂಕಿನ ತಹಶೀಲ್ದಾರ್ ಅವರ ಜಿಲ್ಲಾಧಿಕಾರಿಯವರನ್ನು ಕೋರಿ ಪತ್ರ ಬರೆದಿದ್ದರು. ಈ ಪ್ರಸ್ತಾವನಯನ್ನು ಅವಲೋಕಿಸಿರುವ ಅಪರ ಜಿಲ್ಲಾಧಿಕಾರಿ ಡಾ. ಜಿ.ಸಂತೋಷ್ ಕುಮಾರ್, ಕ.ಆ.ಸೇ., ರವರು ಜಿಲ್ಲಾಧಿಕಾರಿಗಳ ಪರವಾಗಿ ಈ ಕೆಳಗಿನಂತೆ ಆದೇಶ ಹೊರಡಿಸಿರುತ್ತಾರೆ.
ಸೆ 3 ರಂದು 9 ಗಂಟೆಯಿಂದ 5 ಗಂಟೆಯವರೆಗೆ ಬೆಳ್ತಂಗಡಿ ಪೇಟೆಯನ್ನು ಹಾದುಹೋಗುವ ಕಡೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು, ಉಜಿರೆಯಿಂದ ಮಂಗಳೂರು ಕಡೆಗೆ ಹಾದು ಹೋಗುವ ಎಲ್ಲಾ ವಾಹನಗಳನ್ನು ಕೊಟ್ಟೂರು ಕ್ರಾಸ್ ರಸ್ತೆಯ ಮೂಲಕ ಆದ್ರುಪೆರಾಲ್ ಮುಖಾಂತರ ಪರಪ್ಪು ಗೇರುಕಟ್ಟೆಯಾಗಿ ಮಂಗಳೂರು ಕಡೆಗೆ ಸಂಚರಿಸುವಂತೆ ಸೂಚಿಸಲಾಗಿದೆ.
ಹಾಗೆಯೇ ಮಂಗಳೂರಿನಿಂದ ಉಜಿರೆ -ಚಾರ್ಮಾಡಿಗೆ ತೆರಳುವ ಎಲ್ಲಾ ವಾಹನಗಳನ್ನು ಗುರುವಾಯನಕೆರೆಯಲ್ಲಿ. ಉಪ್ಪಿನಂಗಡಿ ರಸ್ತೆ ಮೂಲಕ, ಪರಪ್ಪು ಕ್ರಾಸ್‌ನಲ್ಲಿ ಆದ್ರುಪೆರಾಲ್ ಮುಖಾಂತರ ಹೋಗುವಂತೆ ಸೂಚಿಸಲಾಗಿದೆ.
ಉಳಿದ ಸಣ್ಣ ವಾಹನಗಳನ್ನು ಚರ್ಚ್ ಕ್ರಾಸ್‌ನಿಂದ ಕನ್ನಾಜೆ ಪಡ್ಡಾಡಿ ಲಾಯಿಲ ಮಾರ್ಗವಾಗಿ ಉಜಿರೆ ಕಡೆ ಸಂಚರಿಸುವಂತ ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ